ಕ್ಯಾಸನೂರು ಅರಣ್ಯ ರೋಗ (ಮಂಗನ ಕಾಯಿಲೆ)
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತಿಚೆಗೆ ಕ್ಯಾಸನೂರು ಅರಣ್ಯ ರೋಗ (ಮಂಗನ ಕಾಯಿಲೆ - ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಕ್ಯಾಸನೂರು ಅರಣ್ಯ ರೋಗ ದ ಬಗ್ಗೆ ತಿಳಿಯಿರಿ :
- ಚಿಗಟ, ನೊಣಗಳಿಂದ ಪ್ರಾಥಮಿಕವಾಗಿ ಹರಡುವ ಇದೊಂದು ವೈರಾಣು ಸೋಂಕು.
- ನಮ್ಮ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ, ಮಹಾರಾಷ್ಟ್ರ, ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗಿವೆ. ಹಿರಿಯರು ಮತ್ತು ಕಿರಿಯರೆನ್ನದೇ ಎಲ್ಲರನ್ನೂ ಇದು ಬಾಧಿಸಬಹುದು.
- ಮೊದಲ ಬಾರಿಗೆ ಇದು 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನ ಕಾಡಿನಲ್ಲಿ ಒಂದು ಕೋತಿಯಲ್ಲಿ ಈ ವೈರಸ್ ಕಂಡುಬಂದಿತು. ಆದ್ದರಿಂದಲೇ ಇದನ್ನು ಕ್ಯಾಸನೂರು ಅರಣ್ಯ ಕಾಯಿಲೆ ಎಂದು ಕರೆಯಲಾಗುತ್ತದೆ.
- ಫ್ಲಾವಿವಿರಿಡೆ ಎಂಬ ಹೆಸರಿನ ವೈರಸ್ನಿಂದ ಈ ಕಾಯಿಲೆ ಹರಡುತ್ತದೆ. ಈ ವೈರಸ್ ಇತರ ಪ್ರಾಣಿಗಳಿಗೆ/ಸಣ್ಣ ಪುಟ್ಟ ಜೀವಿಗಳಿಗೆ ತಗುಲಿ ಅವು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಹರಡುತ್ತದೆ.
- ಮನುಷ್ಯರಿಗೆ ಸಾಮಾನ್ಯವಾಗಿ ಕಾಡಿಗೆ ಹೋದಾಗ ಚಿಗಟ ಅಥವಾ ಉಣ್ಣಿಗಳಿಂದ ಅಥವಾ ಸತ್ತ ಮಂಗನ ಸಂಪರ್ಕದಿಂದ ಈ ಕಾಯಿಲೆ ಹರಡುತ್ತದೆ.
- ಮನುಷ್ಯರಿಂದ ಮನುಷ್ಯರಿಗೆ ಈ ಕಾಯಿಲೆ ಹರಡಿರುವುದು ಇನ್ನೂ ದೃಢಪಟ್ಟಿಲ್ಲ.
- ಈ ಸಾಂಕ್ರಾಮಿಕ ವು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಜನವರಿಯಿಂದ ಏಪ್ರಿಲ್‌ವರೆಗೆ ಈ ರೋಗದ ಹರಡುವಿಕೆ ವ್ಯಾಪಕವಾಗಿರುತ್ತದೆ. ಇದಾದ ನಂತರ ಮೇ ಮತ್ತು ಜೂನ್ ಸಮಯಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ.
- ಈ ಕಾಯಿಲೆಯ ಮೊದಲ ಲಕ್ಷಣವೇ ಸೋಂಕು ತಗುಲಿದ ಒಂದು ವಾರದ ನಂತರ ಕಾಣಿಸಿಕೊಳ್ಳುವ ಜ್ವರ. ಒಂದು ಬಾರಿ ಈ ವೈರಸ್ ದೇಹವನ್ನು ಸೇರಿದರೆ ಸತತ 10 ರಿಂದ 12 ದಿನಗಳವರೆಗೆ ಜ್ವರ ಕಾಡುತ್ತದೆ. ಚಳಿ, ಜ್ವರ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ನಂತರ ಕಡಿಮೆ ರಕ್ತದೊತ್ತಡ, ರಕ್ತ ಕಣಗಳ (ಪ್ಲೇಟ್‌ಲೆಟ್‌ಗಳು, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು) ಸಂಖ್ಯೆ ಕಡಿಮೆಯಾಗುವುದು, ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳು ಕಾಣಿಸಿಕೊಳ್ಳುತ್ತವೆ.
- ಈ ಕಾಯಿಲೆಗೆ ಎಂದು ಪ್ರತ್ಯೇಕವಾದ ಚಿಕಿತ್ಸಾ ವ್ಯವಸ್ಥೆ ಇಲ್ಲ.
Comments (0)